ಕಾಲಿಯ

  ರಮಣಕ ದ್ವೀಪದಲ್ಲಿ ವಾಸವಾಗಿದ್ದ ಒಂದು ಸರ್ಪ. ಕದ್ರೂ ಕಶ್ಯಪರ ಮಗ. ಗರುಡ ಸಾಮೂಹಿಕವಾಗಿ ಸರ್ಪಗಳನ್ನು ಕೊಲ್ಲುತ್ತಿದ್ದಾಗ ಸರದಿಯಂತೆ ಒಂದೊಂದನ್ನು ಕಳಿಸಿಕೊಡಲು ಸರ್ಪಗಳು ಒಪ್ಪಂದ ಮಾಡಿಕೊಂಡಿದ್ದವು. ಕಾಲಿಯ ತನ್ನ ಸರದಿ ಬಂದಾಗ ಗರುಡನಿಗೆ ಆಹಾರವಾಗಲು ನಿರಾಕರಿಸಿದ. ಕಾಳಿಂದೀ ಮಡುವಿನ ಹತ್ತಿರ ಗರುಡ ಸುಳಿದರೆ ಅವನ ತಲೆ ಒಡೆಯುವುದೆಂದು ಸೌಭರಿ ಮುನಿಯಶಾಪವಿದ್ದುದನ್ನು ಅರಿತ ಕಾಲಿಯ ತಲೆತಪ್ಪಿಸಿಕೊಂಡು ಆ ಮಡು ಸೇರಿದ. ಸರ್ಪನ ವಿಷಜ್ವಾಲೆಯಿಂದ ಆ ಮಡುವೆಲ್ಲ ವಿಷಮಯವಾಗಿ ಅಲ್ಲಿನ ಜಲಚರಗಳೆಲ್ಲ ಸಾಯತೊಡಗಿದವು. ಇದನ್ನು ತಿಳಿದ ಬಲರಾಮಕೃಷ್ಣರು ಅಲ್ಲಿಗೆ ಹೋದರು. ಕೃಷ್ಣ ಮಡುವಿನಲ್ಲಿ ಆಡುತ್ತಿದ್ದ ಸರ್ಪದ ಬಾಲವನ್ನು ಹಿಡಿದು ಅದರ ಹೆಡೆಯನ್ನು ತುಳಿಯತೊಡಗಿದ. ಅಷ್ಟರಲ್ಲಿ ಕಾಲಿಯನ ಪತ್ನಿಯರಾದ ನಾಗಕನ್ಯೆಯರು ಕೃಷ್ಣನಲ್ಲಿಗೆ ಬಂದು ಪತಿಭಿಕ್ಷೆ ಬೇಡಲಾಗಿ ಕೃಷ್ಣ ಅವರಿಗೆ ಅಭಯವಿತ್ತು ಕಾಲಿಯನಿಗಿದ್ದ ಗರುಡ ಭಯ ತಪ್ಪಿಸಿ ಅವನನ್ನು ಪಾತಾಳಕ್ಕೆ ಕಳುಹಿಸಿದ.         

(ಬಿ.ಎಚ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ